ಭಾರತದ ಮಣ್ಣುಗಳು	

ಪ್ರಪಂಚದ ಇತರ ಭೂಪ್ರದೇಶಗಳಲ್ಲಿ ಇರುವಂತೆ ಭಾರತದಲ್ಲೂ ತಾಯಿಬಂಡೆ ಮತ್ತು ಹವೆ ಇವುಗಳಲ್ಲಿಯ ವೈವಿಧ್ಯದ ಕಾರಣ ಬಗೆ ಬಗೆಯ ಮಣ್ಣುಗಳು ಕಾಣಬರುತ್ತವೆ. ಇಲ್ಲಿಯ ಮಣ್ಣುಗಳ ಬಗ್ಗೆ ವ್ಯಾಪಕ ಅಧ್ಯಯನ ಹಾಗೂ ಸಮೀಕ್ಷೆ ನಡೆದು ಸುಮಾರು 24 ಬಗೆಯ ಮಣ್ಣುಗಳನ್ನು ಗುರುತಿಸಲಾಗಿದೆ. ಇವನ್ನು ಸ್ಥೂಲವಾಗಿ 4 ಗುಂಪುಗಳಾಗಿ ವಿಂಗಡಿಸಲಾಗಿದೆ: ಕೆಂಪುಮಣ್ಣುಗಳು, ಜಂಬಿಟ್ಟಿಗೆ ಮಣ್ಣುಗಳು, ಕÀಪ್ಪು ಮಣ್ಣುಗಳು ಮತ್ತು ಮೆಕ್ಕಲು ಮಣ್ಣುಗಳು.

	ಕೆಂಪುಮಣ್ಣುಗಳು: ಮಣ್ಣಿನ ಕೆಂಪು ಅಥವಾ ಕಂದು ಬಣ್ಣವೇ ಈ ಬಗೆಯ ವರ್ಗೀಕರಣಕ್ಕೆ ಆಧಾರ. ಇದರಲ್ಲಿರುವ ಕಬ್ಬಿಣದ ಆಕ್ಷೈಡ್ ಅಂಶವೇ ಈ ಬಣ್ಣಕ್ಕೆ ಕಾರಣ. ಕಬ್ಬಿಣದ ಆಕ್ಸೈಡ್ ಅಂಶ ಶೇಕಡಾ 5-8 ಕ್ಕಿಂತ ಹೆಚ್ಚಿಲ್ಲ. ಜೊತೆಗೆ ಮಣ್ಣಿನಲ್ಲಿ ನೀರಿನ ಅಂಶವೂ ಇರುವುದರಿಂದ ಕಡುಕೆಂಪು ಛಾಯೆ ಬಂದಿದೆ. ಇಂಥ ಮಣ್ಣುಗಳನ್ನು ಪ್ರಧಾನವಾಗಿ ದಕ್ಷಿಣ ಭಾರತದಲ್ಲಿ ಕಾಣಬಹುದು. ಸಾಧಾರಣವಾಗಿ ಇವು ಕೆಂಪು ಮರಳು ಮಣ್ಣು, ಅಗ್ನಿಶಿಲೆ ಮತ್ತು ನೈಸ್ ಶಿಲೆಗಳಿಂದ ರೂಪುಗೊಂಡಿವೆ. ಮತ್ತೆ ಕೆಲವು ಮರಳುಶಿಲೆ, ಹಾರ್ನ್‍ಬ್ಲೆಂಡ್, ಮೈಕ, ಸಿಸ್ಟ್, ಅಮ್ಲಟ್ರ್ಯಾಪ್, ಕ್ವಾಟ್ರ್ಸ್‍ಜೈಟಿಸ್ ಮತ್ತು ಜೇಡಿ ಪದರುಗಲ್ಲುಗಳಿಂದ ಆಗಿವೆ. ಕೆಂಪುಮಣ್ಣು ಪೂರ್ವತೀರದ ಉದ್ದಕ್ಕೂ ಮುಂದೆ ಈಶಾನ್ಯದಲ್ಲಿ ಅಸ್ಸಾಮಿನಲ್ಲೂ ವ್ಯಾಪಿಸಿದೆ. ಪೂರ್ವ ಮಧ್ಯ ಭಾರತದಲ್ಲಿ ಕೆಂಪುಮಣ್ಣು ಇದೆ. ಆದರೆ ಈ ವಿವಿಧ ಪ್ರದೇಶಗಳ ಮಣ್ಣಿನ ಕಣಗಾತ್ರ ರಚನೆಯಲ್ಲಿ ಹೆಚ್ಚು ವ್ಯತ್ಯಾಸ ಕಂಡುಬರುತ್ತದೆ. ಮರಳು, ಗೋಡು, ಜೇಡಿ ಹೀಗೆ ವಿವಿಧ ಕಣಗಾತ್ರರಚನೆಯುಳ್ಳ ಕೆಂಪುಮಣ್ಣುಗಳನ್ನು ಕಾಣಬಹುದು. ಈ ವೈವಿಧ್ಯಕ್ಕೂ ಈ ಮಣ್ಣಗಳ ಹುಟ್ಟಿಗೂ ತಾಯಿಬಂಡೆಯೇ ಕಾರಣ. ಕೆಂಪು ಮಣ್ಣನ್ನು ಕೆಂಪು ಗೋಡುಮಣ್ಣು, ಕೆಂಪು ಮರಳುಮಣ್ಣು ಎಂದು ಮತ್ತೆ ಉಪ ವಿಭಾಗಿಸಲಾಗಿದೆ.

	ಕೆಂಪುಗೋಡುಮಣ್ಣು: ಇದು ನೈಸ್ ಚಾರ್ನಕೈಟ್, ಡೈಯೊರೈಟ್ಸ್ ಮುಂತಾದ ಶಿಲೆಗಳು ಶಿಥಿಲಗೊಂಡಿದ್ದರಿಂದ ಆದದ್ದು. ಇದರಲ್ಲಿ ಜೇಡಿಖನಿಜಗಳು ಹೆಚ್ಚಾಗಿವೆಯಲ್ಲದೆ ಆಮ್ಲಕಾರಕ ಸಿಲಿಕಾಂಶ ಕಡಿಮೆ ಇರುತ್ತದೆ. ಪ್ರತ್ಯಾಮ್ಕವಾಗಿ ಅಸಂಯುಕ್ತ ಸಿಲಿಕ ಇಲ್ಲದ್ದರಿಂದ ಹೆಚ್ಚು ನವುರು ಕಣಗಳಿರುವ ಗೋಡು ಮಣ್ಣು ರೂಪುಗೊಳ್ಳುತ್ತದೆ. ಕೆಲವೆಡೆ ಈ ಮಣ್ಣಿನಲ್ಲಿ ಸುಣ್ಣ ಹರಳು ಕೂಡ ಇರುವುದುಂಟು. ಸಾಧಾರಣವಾಗಿ ಈ ಮಣ್ಣಿನಲ್ಲಿ ಹೈಡ್ರೊಜನ್ ಅಯಾನ್ ಸಾರತೆ (ಠಿಊ) ಸ್ವಲ್ಪ ಆಮ್ಲೀಯಲ್ಲಿ ಇಲ್ಲವೆ ಸಮಧಾತುವಾಗಿದ್ದು 7ರ ಸಮೀಪದಲ್ಲಿರುತ್ತದೆ. ಸುಣ್ಣ ಇರುವಂಥಲ್ಲಿ ಠಿಊ 8ರ ವರೆಗೂ ಹೋಗಬಹುದು.  ಂ ವಲಯದ್ದು, ಅಂದರೆ ಮೇಲ್ಮಣ್ಣು 25-40 ಸೆಂಮೀ ಆಳದವರೆಗೆ ಇದ್ದು ಕೆಂಪು ಕಂದುಬಣ್ಣ ಮತ್ತು ತಿರುಳು ಕಣಜೋಡಣೆ ಹೊಂದಿರುತ್ತದೆ. ಃ ವಲಯದ್ದು ಅಂದÀರೆ ತಳಮಣ್ಣು 76ರಿಂದ 90 ಸೆಂಮೀ ಆಳದವರೆಗೆ ಇದ್ದು ಕಂದು ಬಣ್ಣದ ಗೋಡು ಇಲ್ಲವೆ ಜೇಡಿ ಕಣಜೋಡಣೆ ಹೊಂದಿರುತ್ತದೆ. ಇದರ ತಳದಲ್ಲಿ ಶಿಥಿಲಗೊಂಡ ಬಂಡೆ ಚೂರುಗಳಿರುತ್ತವೆ. ತಾಯಿಬಂಡೆಗಳಲ್ಲಿ ಸುಣ್ಣವಿದ್ದಾಗ ಗಟ್ಟಿ ಸುಣ್ಣ ಶೇಖರಣೆಯಾಗಿರುವುದು ಕಂಡುಬರುತ್ತದೆ. ಇಂಥ ಸನ್ನಿವೇಶಗಳಲ್ಲಿ ಃ ವಲಯದಲ್ಲೂ ಸುಣ್ಣದ ಹರಳು ಇರುವುದು ಸಾಧ್ಯ.

	ಕೆಂಪು ಮರಳುಮಣ್ಣು: ಇದು ಸಾಮಾನ್ಯವಾಗಿ ಅಗ್ನಿಶಿಲೆ, ಗ್ರಾನೈಟ್‍ನೈಸ್ ಕ್ವಾಟ್ರ್ಸ್‍ಜೈಟಿಸ್, ಮರಳು ಶಿಲೆ ಇಂಥವುಗಳಿಂದ ರೂಪುಗೊಂಡದ್ದು. ಇದರಲ್ಲಿ ಒರಟು ಮತ್ತು ಮರಳಿನ ಅಂಶ ಹೆಚ್ಚಾಗಿರುತ್ತದೆ. ಜೇಡಿ ಖನಿಜಗಳು, ಕೆಂಪು ಲಿಮೊನೈಟ್, ಹಳದಿ ಲಿಮೊನೈಟ್ ಮುಂತಾದ ಕಬ್ಬಿಣದ ಆಕ್ಸೈಡುಗಳಿಂದ ಆವೃತವಾಗಿದ್ದು ಕೆಂಪು ಅಥವಾ ಕೆಂಪು ಹಳದಿ ಬಣ್ಣ ಇರುತ್ತದೆ. ಹಳದಿ ಮಣ್ಣು ಜಲವಿಮುಕ್ತವಾದಾಗ ಅದರ ಬಣ್ಣ ಕೆಂಪಾಗುತ್ತದೆ. ಸಾಮಾನ್ಯವಾಗಿ ಈ ಮಣ್ಣಿನಲ್ಲಿ ಕಬ್ಬಿಣದ ಗ್ರಾವೆಲ್ ಇರುತ್ತದೆ. ಇದರ ಜೇಡಿಖನಿಜ ಮುಖ್ಯವಾಗಿ ಕೆಯೊಲಿನೈಟ್ ಮತ್ತು ಇಲೈಟುಗಳಿಂದ ಕೂಡಿದೆ. ಈ ಮಣ್ಣಿನ ಪ್ರತ್ಯಾಮ್ಲ ವಿನಿಮಯ ಸಾಮಥ್ರ್ಯ ಇದರಲ್ಲಿಯ ಚೇಡಿ ಅಂಶಕ್ಕೆ ಅನುಗುಣವಾಗಿ (100 ಗ್ರಾಮುಗಳಿಗೆ 5_25 ಮಿಲಿ ಈಕ್ವಿವಲೆಂಟ್) ಇರುತ್ತದೆ. ಇವುಗಳ ಠಿಊ 4.5-6.5. ಂ ವಲಯ ಸಾಧಾರಣ ಆಳದ್ದು. ಕಣಗಾತ್ರ ರಚನೆ ಸಾಮಾನ್ಯವಾಗಿ ಒರಟು. ಃ ವಲಯದ ಆಳ ಸುಮಾರು 15 ಸೆಂಮೀ. ಇದು ಮೇಲ್ಮಣ್ಣಿಗಿಂತಲೂ ಸ್ವಲ್ಪ ಹೆಚ್ಚು ಜೇಡಿಯುಳ್ಳದ್ದು. ಔ ವಲಯದ ಮಣ್ಣು ಹುಡಿಬಂಡೆ ಶಿಥಿಲಗೊಂಡು ಉಂಟಾಗಿರುವ ಒರಟು ಗ್ರಾನೈಟ್ ಅಥವಾ ಗ್ರಾನೆಟ್ ನೈಸ್ ವಸ್ತುಗಳನ್ನು ಒಳಗೊಂಡಿರುತ್ತದೆ. ಇವುಗಳ ಲಂಬಕೊಯ್ತವನ್ನು ಪರೀಕ್ಷಿಸಿದರೆ ತಾಯಿಬಂಡೆಗಳ ರಚನೆಯಲ್ಲೂ ಈ ಸ್ಥಿತಿ ಬಲು ಹಿಂದಿನಿಂದಲೂ ಉಳಿದಿರುವುದು ಕಂಡುಬರುತ್ತದೆ. ಮಣ್ಣನ್ನು ಅದುಮಿದರೆ ಪುಡಿಪುಡಿಯಾಗುತ್ತದೆ. ಈ ಮಣ್ಣುಗಳಲ್ಲಿ ಮಳೆ ಇಲ್ಲವೆ ನೀರಾವರಿ ಅನುಕೂಲಗಳಿಗೆ ಅನುಗುಣವಾಗಿ ಅನೇಕ ಬೆಳೆಗಳನ್ನು ತೆಗೆಯಬಹುದು.

	ಜಂಬಿಟ್ಟಿಗೆ ಮಣ್ಣುಗಳು: ಇವುಗಳ ಬಣ್ನ ಸಾಮಾನ್ಯವಾಗಿ ಕೆಂಪು ಇಲ್ಲವೆ ಹಳದಿಗೆಂಪು. ರಚನೆ ಜೇನುಗೂಡನ್ನು ಹೋಲುತ್ತದೆ. ಇವು ಸಾಂದ್ರವಾಗಿದ್ದು ಗಟ್ಟಿಯಾಗಿ ಇರಬಹುದು ಇಲ್ಲವೆ ಕಬ್ಬಿಣದ ಸಣ್ಣ ಸಣ್ಣ ಗಂಟುಗಳ ಸಡಿಲವಾದ ಮೊತ್ತವಾಗಿಯೂ ಇರಬಹುದು. ಹದ ಎನ್ನುವಂಥ ತೇವವಿರುವ ಸನ್ನಿವೇಶಗಳಲ್ಲಿ ಈ ಮಣ್ಣನ್ನು ಕಿತ್ತು ತೆಗೆದು ಕತ್ತರಿಸಿ ಅನಂತರ ಒಣಗಿಸಿ ಇಟ್ಟಿಗೆಯಾಗಿ ಬಳಸುತ್ತಾರೆ. ಇಟ್ಟಿಗೆಗಳು ಒಣಗಿದಾಗ ಕಲ್ಲಿನಂತೆ ಗಟ್ಟಿಯಾಗುತ್ತವೆ. ಕಟ್ಟಡ ನಿರ್ಮಾಣಕ್ಕೆ ಇವನ್ನೂ ಬಳಸುತ್ತಾರೆ. ವಾಸ್ತವವಾಗಿ ಲ್ಯಾಟರೈಟ್ ಎಂಬ ಹೆಸರು ಇಟ್ಟಿಗೆ ಎಂಬ ಅರ್ಥವುಳ್ಳ ಲ್ಯಾಟಿನ್ ಪದದಿಂದ ಜನ್ಯವಾದದ್ದು. ವಿಶಿಷ್ಟ ಬಗೆಯ ಪ್ರತ್ಯಾಮ್ಲ ಶಿಲೆಗಳಿರುವ, ಹೆಚ್ಚು ಮಳೆ ಬೀಳುವ ಉಷ್ಣವಲಯ ಪ್ರದೇಶಗಳಲ್ಲಿ ಇಂಥ ಲ್ಯಾಟರೈಟ್‍ಕಾರಕ ಪ್ರತಿಕ್ರಿಯೆ ಉಂಟಾಗುತ್ತದೆ. ಅಧಿಕ ಬಸಿಯುವಿಕೆಯ ಕಾರಣ ಪ್ರತ್ಯಾಮ್ಲಗಳು ಕಳೆದುಹೋಗುತ್ತವೆ. ಬಸಿಯುವ ನೀರು ಕ್ಷ್ಷಾರೀಯವಾದದ್ದರಿಂದ ಸಿಲಿಕ ವಿಲೀನವಾಗಿ, ಕೆಳಮುಖವಾಗಿ ಚಲಿಸಿ, ಮೇಲ್ಮೈಯಲ್ಲಿ ಕಬ್ಬಿಣ ಮತ್ತು ಅಲ್ಯೂಮಿನಿಯಮ್ ಆಕ್ಸೈಡ್ ಶೇಖರಣೆಯಾಗುತ್ತದೆ; ಲ್ಯಾಟರೈಟ್ ಕಲ್ಲುಗಳಿಂದ ವಿಭಜನೆಗೊಂಡ ವಸ್ತುವಿನಿಂದ ಕೂಡಿರುವ ಮಣಿಗೆ ಲ್ಯಾಟರಿಟಕ್ ಅಥವಾ ಜಂಬಿಟ್ಟಿಗೆ ಮಣ್ಣು ಎಂದು ಹೆಸರು.

	ಈ ಮಣ್ಣುಗಳಲ್ಲಿ ಮೂಲ ಜೇಡಿ ಖನಿಜಗಳಿಲ್ಲ. ಆದ್ದರಿಂದ ನಮ್ಯತೆ, ಜಿಗುಟುತನ, ಸಂಕೋಚನ ಸಾಮಥ್ರ್ಯ, ಪ್ರತ್ಯಾಮ್ಲ ವಿನಿಮಯ ಸಾಮಥ್ರ್ಯ (100 ಗ್ರಾಮ್ ಲ್ಯಾಟರೈಟಿಗೆ2-4ಮಿಲಿ ಈಕ್ವಿವಲೆಂಟ್) ಇವೆಲ್ಲ ಕಡಿಮೆ; ಲ್ಯಾಟರೈಟ್ ಮಣ್ಣುಗಳಿಗೆ ಪ್ರತ್ಯಾಮ್ಲ ವಿನಿಮಯ ಸಾಮಥ್ರ್ಯ 4ರಿಂದ 6 ಇರಬಹುದು. ಸಿಲಿಕ ಸೆಸ್ಕ್ವಿ ಆಕ್ಸೈಡ್ ಅನುಪಾತ ಸುಮಾರು 3:5 ಕ್ಕಿಂತಲೂ ಕಡಿಮೆ ಇರುತ್ತದೆ. ಎಲ್ಲೊ ಕೆಲವೆಡೆ ಹೊರತು ಉಳಿದೆಡೆ ಈ ಮಣ್ಣುಗಳ ಆಳ ಕಡಿಮೆ. ಹೆಚ್ಚು ಮಳೆ ಬೀಳುವ ಪಶ್ಚಿಮಕರಾವಳಿ, ಮತ್ತು ಅಸ್ಸಾಮಿನ ಗುಡ್ಡಪ್ರದೇಶಗಳಲ್ಲಿ ಈ ಬಗೆಯ ಮಣ್ಣು ಕಾಣಬರುತ್ತದೆ. ಕಾಫಿ, ಟೀ, ಏಲಕ್ಕಿ, ಅಡಿಕೆಯಂಥ ತೋಟದ ಬೆಳೆಗಳನ್ನು ಈ ಮಣ್ಣಿನಲ್ಲಿ ಬೆಳೆಸುತ್ತಾರೆ.

	ಕಪ್ಪು ಮಣ್ಣುಗಳು: ಇವು ಭಾರತದ ಮಧ್ಯ ಮತ್ತು ದಕ್ಷಿಣ ಮಧ್ಯ ಭಾಗಗಳಲ್ಲಿ ಕಾಣ ಬರುತ್ತವೆ. ಬಣ್ಣ ದಟ್ಟಕಂದಿನಿಂದ ಅಚ್ಚ ಕಪ್ಪಿನವರೆಗೆ ವಿವಿಧ. ಮಣ್ಣಿನ ಆಳ ಅನುಸರಿಸಿ ಇವನ್ನು ವಿಂಗಡಿಸುವುದಿದೆ: 30 ಸೆಂಮೀ. ಗಿಂತ ಕಡಿಮೆ ಆಳದಲ್ಲಿರುವುದು ಆಳವಿಲ್ಲದ ಕಪ್ಪು ಮಣ್ಣು; 80-100 ಸೆಂಮೀ. ಆಳದಲ್ಲಿರುವುದು ಮಧ್ಯಮ ಆಳದ ಕಪ್ಪು ಮಣ್ಣು: 100-200 ಸೆಂಮೀ ಇಲ್ಲವೆ ಹೆಚ್ಚು ಆಳದಲ್ಲಿರುವುದು ಆಳದ ಕಪ್ಪು ಮಣ್ಣು; ಕಪ್ಪು ಮತ್ತು ಕೆಂಪು ಮಣ್ಣು ಮಿಶ್ರಣಗಳು ಈ ಮಣ್ಣುಗಳಲ್ಲಿ ಸಾಮಾನ್ಯವಾಗಿ ಜೇಡಿನ ಅಂಶ ಹೆಚ್ಚು (40-100%). ಮಣ್ಣು ಒದ್ದೆ ಇರುವಾಗ ನಮ್ಯವಾಗೂ ಜಿಗುಟಾಗೂ ಇರುತ್ತದೆ. ಒಣಗಿರುವಾಗ ಹೆಚ್ಚುಗಟ್ಟಿಯಾಗೂ ಇರುವುದು. ಇವುಗಳ ಚೇಡಿ ಮಾಂಟಿಮರಿಲೊನೈಟ್ ಎಂಬ ಖನಿಜದಿಂದ ಕೂಡಿದೆ. ಈ ಕಾರಣ ಇವುಗಳಲ್ಲಿಯ ತೇವಾಂಶ ವ್ಯತ್ಯಾಸವಾದಂತೆ ಇವು ಉಬ್ಬುತ್ತವೆ ಮತ್ತು ತಗ್ಗುತ್ತವೆ ಕೂಡ. ಆಳ ಬಿರುಕುಗಳೂ ಉಂಟಾಗುತ್ತವೆ. ಈ ಬಿರುಕುಗಳಲ್ಲಿ ಮೇಲ್ಮೈ ಮಣ್ಣು ಕುಸಿದುಬಿದ್ದು ಮಣ್ಣಿನ ಚಲನೆ ತನ್ನಷ್ಟಕ್ಕೆ ತಾನೇ ಜರಗುತ್ತದೆ. ಈ ಕ್ರಿಯೆಗೆ ಸ್ವಯಂ ಉಳುಮೆ ಅಥವಾ ಸ್ವಯಂ ಆಚ್ಛಾದನೆ ಎಂದು ಹೆಸರು. ಅಂತರರಾಷ್ಟ್ರೀಯ ವರ್ಗೀಕರಣದ ರೀತ್ಯ ಇವನ್ನು ವರ್ಟಿಸಾಲ್ ಎಂಬ ಗುಂಪಿಗೆ ಸೇರಿಸಬಹುದು. ಇವುಗಳಲ್ಲಿ ಹತ್ತಿ, ಜೋಳ, ಬೇಳೆಬೆಳೆ, ಎಣ್ಣೆಕಾಳು ಬೆಳೆಗಳನ್ನು ತೆಗೆಯುತ್ತಾರೆ. ಪ್ರಮುಖ ಬಗೆಯ ಕಪ್ಪು ಮಣ್ಣುಗಳು ದಕ್ಕನ್ ಪ್ರಸ್ಥಭೂಮಿ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಕರ್ನಾಟಕ ಪ್ರದೇಶಗಳಲ್ಲಿ ವ್ಯಾಪಿಸಿವೆ.

	ಆಳವಿಲ್ಲದ ಕಪ್ಪು ಮಣ್ಣು: ಇದು ಪ್ರತ್ಯಾಮ್ಲೀಯ ಗುಣವುಳ್ಳ ಡೆಕ್ಕನ್ ಟ್ರ್ಯಾಪ್ ಬಂಡೆಗಳಿಂದ ಉಂಟಾದದ್ದು. ರಚನೆಯಲ್ಲಿ ಒಂದು ಗೋಡಿನಿಂದ ಜೇಡಿಯ ವರೆಗೂ ಇರುತ್ತವೆ. ಬಣ್ಣ ಕಂದು ಕಪ್ಪಿನಿಂದ ದಟ್ಟ-ಹಳದಿ ಕಪ್ಪಿನ ವರೆಗೆ, ಕಣಜೋಡಣೆ ಕಾಳು ಕಾಳಾಗಿ ಇದೆ. ಕೆಲವೆಡೆ ದುರ್ಬಲ ತುಣುಕುಗಳೂ ಇರಬಹುದು. ಇದರಲ್ಲಿ ಸುಣ್ಣದ ಹರಳು ಸಾಮಾನ್ಯ. ಮಣ್ಣು ಕೆಳಗೆ ಇಳಿದಂತೆಲ್ಲ ಶಿಥಿಲಗೊಂಡ ಗಟ್ಟಿ ಬಸಾಲ್ಪಿನೊಡನೆ ಮಿಳಿತವಾಗುತ್ತದೆ.

	ಮಧ್ಯಮ ಆಳದ ಕಪ್ಪುಮಣ್ಣು: ಇದು ಬಸಾಲ್ಟ್, ಧಾರವಾಡ ಸಿಸ್ಟ್ಸ್ ಪ್ರತ್ಯಾಮ್ಲೀಯ ಗ್ರಾನೈಟ್, ನೈಸ್, ಹಾರ್ನ್‍ಬ್ಲೆಂಡ್, ಕ್ಲೋರೈಟ್‍ಗಳಿಂದ ಕೂಡಿದೆ. ಕಣಗಾತ್ರ ರಚನೆ ಒಂದು ಜೇಡಿಯಿಂದ ಇನ್ನೊಂದು ಜೇಡಿಯವರೆಗೆ. ತಳದ ಮಣ್ಣಿನಲ್ಲಿ ಜೇಡಿ ಶೇಖರಣೆ ಇಲ್ಲ. ಇವುಗಳ ಬಸಿಯುವಿಕೆ ಮತ್ತು ಸಾವಯವ ಅಂಶ ತೃಪ್ತಿಕರ. ಮಣ್ಣಿನ ಆಳದಲ್ಲೆಲ್ಲ ಸುಣ್ಣದ ಅಂಶ ಸಾಧಾರಣವಾಗಿದ್ದರೂ ಅದರ ಶೇಖರಣಿ ವಲಯದಲ್ಲಿ ಹೆಚ್ಚು. ಇದರಲ್ಲಿಯ ಜಿಪ್ಸಮ್ ಶೇಖರಣೆ ಸಾಧಾರಣವಾಗಿ 90 ಸೆಂಮೀ ಆಳದಲ್ಲಿ ಕಂಡುಬರುತ್ತದೆ.

	ಆಳದ ಕಪ್ಪುಮಣ್ಣು: ಇದು 150 ಸೆಂಮೀಗಿಂತಲೂ ಹೆಚ್ಚಿನ ಆಳದಲ್ಲಿ ಜಾಸ್ತಿ ಇರುತ್ತದೆ. ಕೆಲವೊಮ್ಮೆ ಆಳ 244-274ಸೆಂಮೀ ವರೆಗೂ ಹೋಗುವುದುಂಟು. ಈ ಮಣ್ಣಿನಲ್ಲಿ ಜೇಡಿನ ಅಂಶ 40-60%. ಮಣ್ಣಿನ ಆಳದ ಗುಂಟ ಒಂದೇ ಸಮನಾಗಿ ಸುಣ್ಣ ಹರಡಿದೆ. ಸುಣ್ಣದ ಶೇಖರಣೆ 180ಸೆಂಮೀ ಆಳದಲ್ಲಿ ಹೆಚ್ಚಾಗಿರುವುದು ಸಾಮಾನ್ಯ. ಈ ಮಣ್ಣಿನ ತೇವ ಶೇಖರಣಾಸಾಮಥ್ರ್ಯ ಹೆಚ್ಚು. ಮಣ್ಣು ಕೊಚ್ಚಿಹೋಗದ ಹಾಗೆ ಕಾಪಾಡಿದ ಕಡೆಗಳಲ್ಲಿ ಬೀಳುವ 40 ಸೆಂಮೀನಷ್ಟು ಮಳೆಯಿಂದಲೇ ಉತ್ತಮ ಬೆಳೆ ತೆಗೆಯುವುದು ಸಾಧ್ಯ. ಈ ಮಣ್ಣಿನಲ್ಲಿ, ಅದರಲ್ಲೂ ಮೇಲ್ಮಣ್ಣಿನಲ್ಲಿ ಲವಣದ ಅಂಶ ಜಾಸ್ತಿ ಇರುವ ಸಂಭವವೇ ಹೆಚ್ಚು. ಇದರಿಂದ ಮಣ್ಣಿನ ಕಣಜೋಡಣೆ ಏರುಪೇರಾಗಿ ಜಮೀನುಗಳು ನೀರಾವರಿಗೆ ಒಳಗಾದಾಗ ತೊಂದರೆ ಉಂಟಾಗುತ್ತದೆ.

	ಕಪ್ಪು ಮತ್ತು ಕೆಂಪುಮಣ್ಣು ಮಿಶ್ರಣಗಳು: ಕೆಲವೆಡೆ ಬೇರೆ ಬೇರೆ ವಿಸ್ತೀರ್ಣಗಳಲ್ಲಿ ಕೆಂಪುಮಣ್ಣು, ಕಪ್ಪು ಮಣ್ಣು ಒಂದರ ಬದಿಯಲ್ಲಿ ಒಂದು ಇರುವುದು ಸಾಮಾನ್ಯ. ಇದು ಯಾವುದೇ ನಿರ್ದಿಷ್ಟ ಕ್ರಮದಲ್ಲಿ ಇರುವುದಿಲ್ಲ. ಈ ಪರಿಸ್ಥಿತಿ ಕಪ್ಪು ಮತ್ತು ಕೆಂಪು ಮಣ್ಣುಗಳು ಒಂದಕ್ಕೊಂದು ಸೇರುವ ಸನ್ನಿವೇಶಗಳಲ್ಲಿ ಮಾತ್ರ ಕಂಡುಬರುತ್ತದೆ. ನಕಾಶೆಯಲ್ಲಿ ಇವುಗಳ ಸ್ಥಾನವನ್ನು ಗುರುತಿಸುವುದು ಕಷ್ಟ. ಆದ್ದರಿಂದ ಇವನ್ನು ಬೇರೆ ಗುಂಪಾಗಿಯೇ ಸೂಚಿಸಿದೆ. ಅನೇಕ ಸಂದರ್ಭಗಳಲ್ಲಿ ಕೆಂಪು ಮಣ್ಣಿನ ಪ್ರದೇಶಗಳಲ್ಲಿಯ ದಿಬ್ಬಗಳಲ್ಲಿ, ಎತ್ತರದ ಭೂಮಿಗಳಲ್ಲಿ ಕೆಂಪುಮಣ್ಣಿರುವುದು ಕಂಡುಬರುತ್ತದೆ. ಅಲ್ಲಿಯ ತಗ್ಗುಗಳಲ್ಲೂ ಕಪ್ಪುಮಣ್ಣು ಕಂಡುಬರುತ್ತದೆ. ಅಧಿಕ ತೇವ ಮತ್ತು ಸಾವಯವ ಅಂಶ ಮಣ್ಣುಗಳಿಗೆ ಕಪ್ಪು ಅಥವಾ ದಟ್ಟ ಕಂದುಬಣ್ಣ ಉಂಟುಮಾಡುತ್ತದೆ. ಕೆಂಪುಮಣ್ಣಿನ ಪ್ರದೇಶಗಳಲ್ಲಿ ಕೆಲವೆಡೆ ಅಗ್ನಿಶಿಲೆಗಳ ಮಧ್ಯೆ ಅಲ್ಲೊಂದು ಇಲ್ಲ್ಲೊಂದು ಪ್ರತ್ಯಾಮ್ಲೀಯ ಶಿಲೆ ಹೊರಹೊಮ್ಮಿ ಅವುಗಳಿಂದ ಕಪ್ಪುಮಣ್ಣುಗಳು ರೂಪುಗೊಳ್ಳುತ್ತವೆ. ಫೆಲ್ಡ್‍ಸ್ಪಾರ್ ಖನಿಜ, ಸಿಸ್ಟ್ ಮುಂತಾದ ಪ್ರತ್ಯಾಮ್ಲೀ ಶಿಲೆಗಳು ಕಪ್ಪು ಮಣ್ಣು ರೂಪುಗೊಳ್ಳುವುದಕ್ಕೆ ಕಾರಣಗಳು. ಈ ಸನ್ನಿವೇಶಗಳಲ್ಲಿ ತಗ್ಗಿನಲ್ಲೂ ಎತ್ತರದ ಜಮೀನುಗಳಲ್ಲೂ ಕಪ್ಪುಮಣ್ಣಿರುವುದು ಸಾಧ್ಯ. ಹಾಗೆಯೇ ಕಪ್ಪುಮಣ್ಣಿನ ಪ್ರದೇಶಗಳಲ್ಲಿ ಕಡಿಮೆ ವಿಸ್ತಾರದ ಕೆಂಪು ಮಣ್ಣುಗಳು ತೇಪೆ ತೇಪೆಯಾಗಿ ಕಂಡುಬರುವುದು ಕೂಡ ಸಾಮಾನ್ಯ. ಇಂಥ ಸನ್ನಿವೇಶಗಳ ಪರೀಕ್ಷೆಯಿಂದ ಕಪ್ಪುಮಣ್ಣಿನ ಕೆಳಗೆ ಕೆಂಪು ಮಣ್ಣಿರುವುದು ಕಂಡುಬರುತ್ತದೆ. ಆಗ್ನಿಶಿಲೆಯಿಂದ ಉಂಟಾದ ಬಸಾಲ್ಟ್ ಮತ್ತು ಅದರ ಮೇಲೆ ಹರಿದು ಬಂದು ನಿಂತನೀರಿನಿಂದ ಕಪ್ಪುಮಣ್ಣು ಉಂಟಾಗಿರಬೇಕು ಎಂಬುದು ಒಂದು ಮತ. ಕಪ್ಪುಮಣ್ಣುಗಳಲ್ಲಿ ಜೇಡಿನ ಅಂಶ ಹೆಚ್ಚಿರುವದರಿಂದ ಅವುಗಳ ಮೇಲೆ ಬಿದ್ದ ನೀರು ಒಳ ಹೋಗುವುದು ಕಷ್ಟ. ಇದರಿಂದ ಇವು ಕೊಚ್ಚಣೆಗೆ ಒಳಗಾಗುವ ಸಂಭವವೇ ಹೆಚ್ಚು.

	ಮೆಕ್ಕಲು ಮಣ್ಣುಗಳು: ಇವು ನದೀ ಬಯಲುಗಳಲ್ಲಿ ಸಮುದ್ರ ತೀರದಲ್ಲಿ ಪ್ರವಾಹ ಇಲ್ಲವೆ ಕೊಚ್ಚುನೀರಿನಿಂದ ಸಾಗಿಸಲ್ಪಟ್ಟು ಶೇಖರಣೆಗೊಂಡ ವಸ್ತುಗಳಿಂದ ಅಸ್ತಿತ್ವಕ್ಕೆ ಬಂದವು. ಇವುಗಳ ಬಣ್ಣ, ಕಣಗಾತ್ರ ರಚನೆ, ಇತರ ಗುಣಗಳು ಮತ್ತು ಮುಂದೆ ಈ ಮಣ್ಣುಗಳಲ್ಲಿ ಮೇಲ್ಮೈ (ಪ್ರೊಫೈಲ್) ಬೆಳೆವಣಿಗೆ ಇವೆಲ್ಲ ಸಾಗಣೆಯಾದ ಪ್ರದೇಶಗಳ ಮಣ್ಣುಗಳ ಗುಣದಿಂದ ಪ್ರಭಾವಿತವಾಗಿರುತ್ತವೆ. ಮಕ್ಕಲು ಹೊಸದಾದರೆ ಮೇಲ್ಮೈ ವ್ಯತ್ಯಾಸ ಉಂಟಾಗುತ್ತದೆ. ಮೆಕ್ಕಲು ಮಣ್ಣುಗಳ ವಿಶಾಲ ವೈವಿಧ್ಯದ ಕಾರಣ ಅವನ್ನು ಸ್ಥೂಲವಾಗಿ ಈ ಮುಂದಿನ ಗುಂಪುಗಳಾಗಿ ವಿಂಗಡಿಸಿದೆ:

	ಮೆಕ್ಕಲು ಮಣ್ಣುಗಳಲ್ಲಿ ಅವುಗಳಿರುವ ಸ್ಥಳಕ್ಕೆ ಅನುಗುಣವಾಗಿ ತೀರಪ್ರದೇಶದ ಮಣ್ಣುಗಳು ಮತ್ತು ನದೀ ಮುಖಜ ಭೂಮಿಯ ಮೆಕ್ಕಲು ಮಣ್ಣುಗಳು ಎಂದು ಎರಡು ಭಾಗ ಮಾಡಬಹುದು.

	ತೀರ ಪ್ರದೇಶದ ಮೆಕ್ಕಲು ಮಣ್ಣುಗಳು: ಇವು ದಕ್ಷಿಣ ಭಾರತದ ಪಶ್ಚಿಮ ಮತ್ತು ಪೂರ್ವ ತೀರಪ್ರದೇಶಗಳಲ್ಲಿ, ಸಮುದ್ರ ಮತ್ತು ಬೆಟ್ಟಸಾಲುಗಳ ಮಧ್ಯೆ ಇರುವ ಇತ್ತೀಚಿನ ಮಕ್ಕಲುಗಳು. ಈ ಮಣ್ಣುಗಳ ಕಣಗಾತ್ರ ರಚನೆ ಮರಳಿನಿಂದ ಒಂದು ಜೇಡಿಯವರೆಗೂ ಇದೆ. ಹಳೆಯ ಮೆಕ್ಕಲುಗಳನ್ನು ಬಿಟ್ಟರೆ, ಇವುಗಳಲ್ಲಿ ವಲಯ ವ್ಯತ್ಯಾಸಗಳು ಕಂಡುಬರುವುದಿಲ್ಲ. ಇವು ಆಳದಲ್ಲಿದ್ದು ಬಣ್ಣದಲ್ಲಿ ಕೆಂಪು_ಕಂದಿನಿಂದ ತೆಳು ಆಥವಾ ದಟ್ಟಬೂದಿಯವರೆಗೂ ಇರುತ್ತವೆ. ಮಳೆ ಆಶ್ರಯ ಪಡೆದು ಈ ಮಣ್ಣುಗಳಲ್ಲಿ ಬತ್ತ ಬೆಳೆಸುತ್ತಾರೆ. ತೀರಪ್ರದೇಶದಲ್ಲಿ ಕೆಲವೆಡೆ ಮರಳು ಮಣ್ಣುಗಳಿವೆ. ಈ ಭೂಮಿಗಳು ಸಾಧಾರಣವಾಗಿ ತಟ್ಟೆಯಾಗಿದ್ದು ತಗ್ಗುಗಳಲ್ಲಿ ಚೌಳಿನಂತೆ ಕಂಡುಬರುತ್ತವೆ. ಇವುಗಳಲ್ಲಿಯ ಅಂತರ್ಜಲ ಮೇಲೆಯೇ ಇರುವುದರಿಂದ ತೆಂಗು ಮುಂತಾದವುಗಳ ಬೆಳೆಗೆ ಇವು ಬಲು ಉಪಯುಕ್ತ.

	ನದೀ ಮುಖಜಭೂಮಿಗಳಿರುವ ಪ್ರದೇಶ: ಪೂರ್ವಾಭಿಮುಖವಾಗಿ ಹರಿಯುವ ಕಾವೇರಿ, ಕೃಷ್ಣಾ, ಗೋದಾವರಿ ನದಿಗಳು ಸಮುದ್ರ ಸೇರುವುದಕ್ಕೆ ಮೊದಲು ಇರುವ ಎಡೆಗಳಲ್ಲಿ ಇಂಥ ಮೆಕ್ಕಲು ಮಣ್ಣುಗಳು ಕಾಣಬರುತ್ತವೆ. ಅಂತೆಯೇ ಗಂಗಾ ಮತ್ತು ಬ್ರಹ್ಮಪುತ್ರ ನದಿಗಳು ಹಿಮಾಲಯದಿಂದ ಹೊತ್ತು ತರುವ ಮಣ್ಣುನ್ನು ಸಮುದ್ರ ಸೇರುವ ಮುನ್ನವೇ ಬಂಗಾಲ ರಾಜ್ಯದಲ್ಲಿ ನದಿಯ ಅಕ್ಕಪಕ್ಕಗಳಲ್ಲಿ ಬಿಟ್ಟಿವೆ.

	ಸಿಂಧೂ_ಗಂಗಾನದೀಬಯಲುಗಳ ಮೆಕ್ಕಲು ಮಣ್ಣುಗಳು: ಮೆಕ್ಕಲು ಮಣ್ಣುಗಳಲ್ಲಿ ಆತಿ ಮುಖ್ಯವಾದದ್ದು ಸಿಂಧೂ ಗಂಗಾ ನದಿ ಬಯಲಿನವು. ಇವು ಪೂರ್ವ-ಪಶ್ಚಿಮಕ್ಕೆ 1600 ಕಿಮೀ ಮತ್ತು ಉತ್ತರ-ದಕ್ಷಿಣಕ್ಕೆ 320 ಕಿಮೀ ಹರಡಿವೆ. ಈ ಬಯಲಿನ ಬಹುತೇಕ ಪ್ರದೇಶ ತೆಟ್ಟೆ ಇಳಿಜಾರು 1%ಕ್ಕಿಂತ ಹೆಚ್ಚಿಲ್ಲ. ಮಣ್ಣುಗಳ ಬಣ್ಣ ತೆಳು ಬೂದಿನಿಂದ ಹಳದಿ ಕಂದು ಇಲ್ಲವೆ ಕಪ್ಪು ಬೂದಿ. ಬಹುತೇಕ ಮಣ್ಣುಗಳು ಆಳದಲ್ಲಿವೆ. ಕೆಲವೆಡೆ ನೂರಾರು ಸೆಂಮೀ ಆಳ ಇರುವುದುಂಟು. ಕಣಗಾತ್ರ ರಚನೆ ವಡು ಇಲ್ಲವೆ ಜೇಡಿಗೋಡಿನಂತೆ. ಇವು ಬಲು ಫಲವತ್ತಾದವು. ಕೆಲವೆಡೆ ಉಪ್ಪು ಮಣ್ಣಿನ ಭೂಮಿಗಳೂ ಉಂಟು. ಗೋದಿ ಕಡಲೆ, ಎಣ್ಣೆಬೀಜಗಳ ಬೆಳೆಗೆ ಮೆಕ್ಕಲು ಮಣ್ಣು ಬಲುಶ್ರೇಷ್ಠ.

	ಉತ್ತರ ಪ್ರದೇಶದ ಪೂರ್ವ ಭಾಗ ಮತ್ತು ಬಿಹಾರಿನ ಪಶ್ಚಿಮ ಭಾಗಗಳು ಸುಣ್ಣದಿಂದ ಕೂಡಿದ ಮೆಕ್ಕಲು ಮಣ್ಣುಗಳಿಂದ ಕೂಡಿವೆ. ಚೆಸ್ಟ್‍ನಟ್ ಕಂದು ಬಣ್ಣದ ಮಣ್ಣುಗಳು, ಬೂದು ಕಂದು ಬಣ್ಣದ ಮಣ್ಣುಗಳು, ಮರುಭೂಮಿಯ ಮಣ್ಣುಗಳು, ತೆರಯ್ ಮಣ್ಣುಗಳು, ಕಂದುಬೆಟ್ಟ ಮಣ್ಣುಗಳು, ಪರ್ವತ ಮಣ್ಣುಗಳು, ಪರ್ವತ ಹುಲ್ಲುಗಾವಲು ಮಣ್ಣುಗಳು, ಲವಣ ಮತ್ತು ಕ್ಷಾರ ಮಣ್ಣುಗಳು, ಇವೆಲ್ಲ ದೇಶದ ಬೇರೆ ಬೇರೆ ಭಾಗಗಳಲ್ಲಿ ಕಂಡುಬರುವ ಇತರ ಮಣ್ಣುಗಳು.					
(ಬಿ.ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ